ಕ್ಯಾನ್ಸಸ್‍ನ ಇತಿಹಾಸ

ಕಾ ಇಂಡಿಯನರು ಕ್ಯಾನ್ಸಸ್ ಭಾಗದ ಆದಿವಾಸಿಗಳು. ಅವರ ಜೀವನವನ್ನು ಕುರಿತ ವಿಷಯವನ್ನು ಬಿಟ್ಟರೆ ಕ್ಯಾನ್ಸಸ್ ರಾಜ್ಯದ ಬಗ್ಗೆ ಐತಿಹಾಸಿಕ ಮಾಹಿತಿಗಳು ನಮಗೆ ದೊರಕುವುದು ಕ್ರಿ.ಶ.1541ರಲ್ಲಿ-ಸ್ಪೇನಿನ ದಳಪತಿ ಫ್ರಾನ್‍ಸಿಸ್ಕೊ ಡ ಕೊರೊನಾಡೊ, ಎಂಬುವನು ಕ್ಯುವಿರಾ ಎಂಬ ಕಾಲ್ಪನಿಕ ರಾಜ್ಯದ ಸಿರಿಯನ್ನು ಕಂಡುಹಿಡಿಯುವ ಉದ್ದೇಶದಿಂದ ತನ್ನ ಸೈನ್ಯವನ್ನು ಮೆಕ್ಸಿಕೋ ದೇಶದ ಮುಖಾಂತರ ಕೊಂಡೊಯ್ದಾಗ. ತರುವಾಯ ಫ್ರೆಂಚರು 1719-25ರ ನಡುವೆ ಈ ಪ್ರದೇಶವನ್ನು ಪ್ರವೇಶಿಸಿದರೂ 1803ರ ವರೆಗೆ ಅದು ಇಂಡಿಯನರ ವಶದಲ್ಲಿತ್ತು. ಆ ವರ್ಷ ಅಮೆರಿಕ ಸಂಯುಕ್ತಸಂಸ್ಥಾನ ಸರ್ಕಾರ ಪ.ರೇ.1000 ಗಳ ಪಶ್ಚಿಮಕ್ಕೆ ಹಾಗೂ ಆರ್ಕೆನ್ಸಾ ನದಿಯ ದಕ್ಷಿಣಕ್ಕೆ ಇರುವ ಪ್ರದೇಶಗಳನ್ನು ಬಿಟ್ಟು, ಉಳಿದ ಭಾಗಗಳನ್ನು ಲೂಸಿóಯಾನ ಪರ್ಚೇಸ್ ವಹಿವಾಟಿಗೆ ಸೇರಿದಂತೆ ಕೊಂಡುಕೊಂಡಿತು. 1803ರಿಂದ 1820ರ ನಡುವಣ ಅವಧಿಯಲ್ಲಿ ಕ್ಯಾನ್ಸಸ್ ಪ್ರದೇಶವನ್ನು ಭೌಗೋಳಿಕವಾಗಿ ಶೋಧಿಸಲಾಯಿತು. 1804ರಲ್ಲಿ ಲೂಯಿಸ್ ಮತ್ತು ಕ್ಲಾರ್ಕ್ ಎಂಬ ಇಬ್ಬರು ಪರಿಶೋಧಕರು ಪೆಸಿಫಿಕ್ ತೀರಕ್ಕೆ ಪ್ರಯಾಣ ಮಾಡುವಾಗ ಕ್ಯಾನ್ಸಸ್ ರಾಜ್ಯದ ಈಶಾನ್ಯ ಭಾಗವನ್ನು ಮುಟ್ಟಿದರು. 1806ರಲ್ಲಿ ಜೆóಬುಲಾನ್ ಎಂ.ಪೈಕ್ ನೈಋತ್ಯಾಭಿಮುಖವಾಗಿ ಪ್ರಯಾಣ ಮಾಡುತ್ತಿದ್ದಾಗ ಈ ರಾಜ್ಯದ ಮೂಲಕ ಸಂಚರಿಸಿದ. 1819ರಲ್ಲಿ ಮೇಜರ್ ಸ್ಟೀಫನ್ ಎಚ್.ಲಾಂಗ್ ಈ ಪ್ರದೇಶದಲ್ಲಿ ತನ್ನ ವೈಜ್ಞಾನಿಕ ತಂಡದೊಡನೆ ಸಂಚರಿಸಿ ಅದು ಮರಳ್ಗಾಡು ಪ್ರದೇಶವೆಂದು ವರದಿಮಾಡಿದ. ಆದರೆ, ಪಶ್ಚಿಮಕ್ಕೆ ಹೋಗುವ ಮುಖ್ಯಮಾರ್ಗ ಕ್ಯಾನ್ಸಸ್ ಮೂಲಕ ಹೋಗುವುದಾಗಿತ್ತು; 1821ರಲ್ಲಿ ವಿಲಿಯಂ ಬೆಕ್ನೆಲ್ ಕ್ಯಾನ್ಸಸ್ ಪ್ರಾಂತ್ಯದ ಮೂಲಕ ಫ್ರಾಂಕ್ಲಿನ್ ಮತ್ತು ಸಾಂಟ ಫಿ ನಗರಗಳ ನಡುವಣ ಲಾಭದಾಯಕ ವ್ಯಾಪಾರ ನಡೆಸುತ್ತಿದ್ದ. ಚಿನ್ನ ಹುಡುಕಲು ಹೊರಟವರು ಮತ್ತು ತುಪ್ಪುಳು ವ್ಯಾಪಾರಿಗಳು ಹೊಸ ಮಾರ್ಗಗಳನ್ನು ಕಂಡುಹಿಡಿದರು. ಕ್ಯಾನ್ಸಸ್ ಪ್ರದೇಶ ಮರುಭೂಮಿ ಎಂಬ ಕಲ್ಪನೆಯನ್ನು ದೂರಮಾಡಲು ಈ ಎಲ್ಲ ಘಟನೆಗಳೂ ಕಾರಣವಾದುವು.

1854ರಲ್ಲಿ ಪ್ರಾದೇಶಿಕ ಸ್ಥಾನಮಾನಗಳು ದೊರಕುವವರೆಗೆ ಈ ಪ್ರದೇಶ ಇಂಡಿಯನರ ವಶದಲ್ಲೇ ಇತ್ತು. ಪುರಾತತ್ವಜ್ಞರು ಈ ಭಾಗದ ಪ್ರಾಚೀನ ಇಂಡಿಯನ್ ಸಂಸ್ಕøತಿಯನ್ನು ಕಂಡುಹಿಡಿದಿದ್ದಾರೆ. ರಿಪಬ್ಲಿಕನ್ ನದಿಯ ಉತ್ತರ ಭಾಗ ಹಾಗೂ ಬ್ಲೂ ನದಿಯ ಬಯಲಿನಲ್ಲಿ ವ್ಯವಸಾಯಪ್ರಧಾನವಾದ ನಾಗರಿಕತೆ ಇತ್ತು. ಬಿಳಿಯರು ಅಲ್ಲಿಗೆ ಕಾಲಿಟ್ಟಾಗ ಕ್ಯಾನ್ಸಸ್, ಒಸೇಜ್, ವಿಚಿಟಾ, ಪಾನೀ ಮತ್ತು ಪ್ಯೂಬ್ಲೊ ಜನಾಂಗದವರು ಅಲ್ಲಿ ವಾಸಿಸುತ್ತಿದ್ದರು. ಕಿಯೊವ, ಕೊಮಾಂಚೆ, ಅರಪೊ, ಷೈಯೆನ್ ಮತ್ತು ಅಪಾಷಿ ಬೇಟೆಯ ಬಣಗಳು ಕ್ಯಾನ್ಸಸ್ ರಾಜ್ಯದಲ್ಲಿ ಅಲೆದಾಡುತ್ತಿದ್ದುವು. 1830ರಲ್ಲಿ ಇಂಡಿಯನ್ ಬಣಗಳ ಬೇರ್ಪಡೆಯ ಅಧಿನಿಯಮ ಜಾರಿಗೆ ಬಂದ ಮೇಲೆ ಫೆಡರಲ್ ಸರ್ಕಾರ ಅನೇಕ ಆದಿವಾಸಿ ಇಂಡಿಯನ್ ಬಣಗಳಿಗಾಗಿ ಕ್ಯಾನ್ಸಸ್ ರಾಜ್ಯದ ಕಾಲಭಾಗದಷ್ಟು ಭೂಮಿಯನ್ನು ಮೀಸಲಿಟ್ಟಿತ್ತು. ಹೋಲ್ಟನ್ ಬಳಿಯ ಪೊಟ ವಾಟೊಮಿ ಎಂಬುದು ಇಂಡಿಯನರು ವಾಸಮಾಡುವ ಅತಿ ದೊಡ್ಡ ಮೀಸಲು ಸ್ಥಳ. ಈಗ ಕ್ಯಾನ್ಸಸ್ ರಾಜ್ಯದಲ್ಲಿ ಬಹು ಮಂದಿ ಇಂಡಿಯನರು ವಾಸವಾಗಿಲ್ಲದಿದ್ದರೂ ಅನೇಕ ಸ್ಥಳಗಳಿಗೆ ಅವರ ಭಾಷೆಯ ಹೆಸರುಗಳೇ ಇವೆ. ಕ್ಯಾನ್ಸಸ್ ಪ್ರದೇಶಕ್ಕೆ ಬಂದು ನೆಲಸಿದ ಬಿಳಿಯರು 1827ರಲ್ಲಿ ಲೆವೆನ್‍ವರ್ತ್ ಕೋಟೆಯನ್ನೂ 1842ರಲ್ಲಿ ಸ್ಕಾಟ್ ಕೋಟೆಯನ್ನೂ 1853ರಲ್ಲಿ ರಿಲೆ ಕೋಟೆಯನ್ನೂ 1845 ಮತ್ತು 1854ರ ನಡುವೆ ಮಾನ್, ಮೆಕೋಯ್ ಮತ್ತು ಆಟ್ಕಿನ್‍ಸನ್ ಕೋಟೆಗಳನ್ನೂ ಕಟ್ಟಿಕೊಂಡರು. ಕ್ರೈಸ್ತಪಂಥಗಳ ಅನೇಕ ಮತಪ್ರಚಾರಕರು 1837ರ ಹೊತ್ತಿಗೆ ಮತಪ್ರಚಾರ ಮಾಡುತ್ತಿದ್ದರು.
ಗುಲಾಮ ಪದ್ಧತಿಯ ವಿರುದ್ಧ ಹೋರಾಟ : 1852ರ ಹೊತ್ತಿಗೆ ವ್ಯವಸ್ಥಿತ ರಾಜ್ಯದ ನಿರ್ಮಾಣಕ್ಕಾಗಿ ಚಳವಳಿ ಪ್ರಾರಂಭವಾಯಿತು. ಕ್ಯಾನ್ಸಸ್-ನೆಬ್ರಾಸ್ಕ ವಿಧೇಯಕದ ಮೇರೆಗೆ ಕ್ಯಾನ್ಸಸ್ ದಾಸ್ಯಪದ್ಧತಿಯಿಂದ ಕೂಡಿದ ರಾಜ್ಯವಾಗಿರಬೇಕೆ ಎಂಬುದನ್ನು ನಿರ್ಧರಿಸಬೇಕಾಯಿತು. ಈ ವಿಧೇಯಕ 1857ರಲ್ಲಿ ಅಧಿನಿಯಮವಾಗಿ ಜಾರಿಗೆ ಬಂದಿತು. ಕ್ಯಾನ್ಸಸ್ ಮತ್ತು ನೆಬ್ರಾಸ್ಕಗಳಲ್ಲಿ ದಾಸ್ಯರಾಜ್ಯವನ್ನು ಸ್ಥಾಪಿಸಲು ನಾಲ್ಕು ವರ್ಷಗಳ ಕಾಲ ಘರ್ಷಣೆಗಳು ನಡೆದು ರಕ್ತಪಾತವಾಯಿತು. ಬಿಳಿಯ ಜನ ಪಶ್ಚಿಮ ಮತ್ತು ದಕ್ಷಿಣ ಕ್ಯಾನ್ಸಸ್ ಭಾಗಗಳನ್ನು ಆಕ್ರಮಿಸಿಕೊಂಡು ಇಂಡಿಯನರ ಮೀಸಲು ಸ್ಥಳಗಳನ್ನು ನಾಶಮಾಡಿದಾಗ ಇಂಡಿಯನರು ಚದರಿಹೋದರು. 1855ರ ಚುನಾವಣೆಗಳಲ್ಲಿ ಮಿಸೂóರಿಯ ದಾಸ್ಯವಾದಿಗಳು ಮತದಾನ ಮಾಡಲು ಕ್ಯಾನ್ಸಸ್ ರಾಜ್ಯವನ್ನು ಪ್ರವೇಶಿಸಿದರು. ಫೆಡರಲ್ ಸರ್ಕಾರ ಕೂಡ ದಾಸ್ಯಪದ್ಧತಿಗೆ ಉತ್ತೇಜನ ಕೊಡುವಂತೆ ತೋರಿತು. ಕೊನೆಗೆ ಸ್ವಾತಂತ್ರ್ಯ ವಾದಿಯಾದ ರಾಬಿನಸನ್ ದಾಸ್ಯರಹಿತ ರಾಜ್ಯವನ್ನು ಸ್ಥಾಪಿಸಲು ಲಾರೆನ್ಸ್ ನಗರ ವಾಸಿಗಳೊಡನೆ ಮುಂದೆ ಬಂದ. ಸ್ವಾತಂತ್ರ್ಯವಾದಿಗಳ ನೆರವಿಗಾಗಿ ಜೇಮ್ಸ್ ಎಚ್ ಲೇನ್ ಸೈನ್ಯವನ್ನು ಜಮಾಯಿಸಿದ. ದಾಸ್ಯವಾದಿಗಳ ಸೈನ್ಯ ಸಾಮ್ಯುಯೆಲ್ ಜೆ.ಜೋನ್ಸ್‍ನ ನಾಯಕತ್ವದಲ್ಲಿ ಲಾರೆನ್ಸ್ ನಗರದ ಮೇಲೆ ಧಾಳಿಮಾಡಿ ಭೀಕರ ಹೋರಾಟ ನಡೆಸಿತು. ಈ ಯುದ್ಧ ವಿಷಮಘಟ್ಟವನ್ನು ಮುಟ್ಟಿದರೂ ವಾಷಿಂಗ್‍ಟನ್ ಅಧಿಕಾರಿಗಳು ಸಮಸ್ಯೆಯ ಬಗ್ಗೆ ಆಸಕ್ತಿ ವಹಿಸಲಿಲ್ಲ. ಕೊನೆಗೆ ಪೊಟ ವಾಟೊಮಿ ಇಂಡಿಯನ್ ಬಣದ ಹತ್ಯಾಕಾಂಡದ ತರುವಾಯ, 1856ರಲ್ಲಿ ಕ್ಯಾನ್ಸಸ್ ಪ್ರಾಂತ್ಯದ ಗವರ್ನರ್ ಜಾನ್ ಗಿಯರಿ ಕೇಂದ್ರದ ಈ ಸೈನ್ಯದ ನೆರವನ್ನು ಪಡೆದು ಪರಿಸ್ಥಿತಿಯನ್ನು ಹದಕ್ಕೆ ತಂದ. ದಾಸ್ಯವಾದಿಗಳು ತಮ್ಮ ಅಕ್ರಮಗಳಿಂದಲೇ ಸೋತರು. ಇಷ್ಟಾದರೂ ಲಿಕಾಂಪ್ಟನ್ ನಗರದಲ್ಲಿ 1857ರಲ್ಲಿ ರಚಿತವಾದ ಸಂವಿಧಾನವನ್ನು ಕ್ಯಾನ್ಸಸ್ ಸ್ವತಂತ್ರ ವಿಧಾನಮಂಡಲ ರದ್ದುಗೊಳಿಸಲಾಗಲಿಲ್ಲ. ಕ್ಯಾನ್ಸಸ್ ಪ್ರಾಂತ್ಯಕ್ಕೆ ರಾಜ್ಯದ ಸ್ಥಾನಮಾನಗಳನ್ನು ಕೊಡಲು ಕಾಂಗ್ರೆಸ್ ನಿಧಾನಿಸಿತು. ವಿಲಿಯಂ ಹೇಡನ್ ಇಂಗ್ಲಿಷ್ ಎಂಬಾತ ಮಂಡಿಸಿದ ವಿಧೇಯಕದ ಮೇರೆಗೆ ದಾಸ್ಯವಾದಿಗಳ ಲಿಕಾಂಪ್ಟನ್ ಸಂವಿಧಾನವನ್ನು ಸ್ವೀಕರಿಸಿ ಹೊಸರಾಜ್ಯ ಸ್ಥಾಪನೆ ಮಾಡಬೇಕಾಗಿತ್ತು. ಆದರೆ ಈ ವಿಧೇಯಕವನ್ನು ಆಗಸ್ಟ್ 21, 1858ರಲ್ಲಿ ಕ್ಯಾನ್ಸಸ್ ಶಾಸನಸಭೆ ಬಹುಮತದಿಂದ ತಿರಸ್ಕರಿಸಿತು. ದಾಸ್ಯವಾದಿಗಳು ತಮಗುಂಟಾದ ಸೋಲಿನಿಂದಾಗಿ ಕ್ಯಾನ್ಸಸ್ ರಾಜ್ಯವನ್ನು ಕ್ರಮಕ್ರಮವಾಗಿ ಬಿಟ್ಟುಹೋದರು. ದಾಸ್ಯ ಸಮಸ್ಯೆ ಕ್ಯಾನ್ಸಸ್ ರಾಜ್ಯದಿಂದ ದೇಶದ ಇತರ ಭಾಗಗಳಿಗೂ ಹರಡಿತು. ಅದೇ ರಾಷ್ಟ್ರದ ಬಹು ಮುಖ್ಯ ಸಮಸ್ಯೆಯಾಯಿತು. ವಿಯಾನ್ ಡಾಟ್ ಸಂವಿಧಾನದಲ್ಲಿ ಕ್ಯಾನ್ಸಸ್ ರಾಜ್ಯಕ್ಕೆ ಜನವರಿ 29, 1861ರಲ್ಲಿ ರಾಜ್ಯದ ಸ್ಥಾನಮಾನಗಳನ್ನು ಕೊಡಲಾಯಿತು.

ಅಮೆರಿಕ ಅಂತರ್ಯುದ್ಧ : 1860ರಲ್ಲಿ ಕ್ಯಾನ್ಸಸ್ ಕ್ಷಾಮಕ್ಕೆ ಒಳಗಾಯಿತು. 1861ರಲ್ಲಿ ಅದಕ್ಕೆ ಸ್ವತಂತ್ರ ರಾಜ್ಯದ ಸ್ಥಾನಮಾನಗಳು ದೊರೆತ ಮೇಲೆ, ಅಮೆರಿಕದ ಅಂತರ್ಯುದ್ಧ ಕಾಲದಲ್ಲಿ(1861-65) ಫೆಡರಲ್ ಸರ್ಕಾರದ ನೆರವಿಗೆ 30,000 ಸೈನಿಕರನ್ನು ಕಳುಹಿಸಬೇಕಾಯಿತು. ಇಂಡಿಯನ್ ಜನರ ಮತ್ತು ಸಂಚುಗಾರರ ದಾಳಿಗಳಿಂದ ಗಡಿಗಳನ್ನು ರಕ್ಷಿಸುವ ಉದ್ದೇಶದಿಂದ ಅಲ್ಲಿ ಸೈನ್ಯದ ಒಂದು ಭಾಗವನ್ನು ಇಡಲಾಯಿತು. ಸೈನ್ಯದ ಬಹುಭಾಗ ರಾಜ್ಯದ ಹೊರಗೆ ಸೇವೆ ಸಲ್ಲಿಸಿತು. ಯುದ್ಧದಲ್ಲಿ ವಿಲಿಯಂ ಸಿ.ಕ್ಯಾನ್‍ಟ್ರಿಲ್ ಎಂಬಾತ ಲಾರೆನ್ಸ್ ನಗರದ ಮೇಲೆ ನಡೆಸಿದ ಧಾಳಿಯಿಂದ ಕ್ಯಾನ್ಸಸ್ ರಾಜ್ಯಕ್ಕೆ ಭಾರಿ ನಷ್ಟ ಉಂಟಾಯಿತು. ಈ ಯುದ್ಧಕಾಲದಲ್ಲಿ ಕ್ಯಾನ್ಸಸ್ ರಾಜ್ಯದಲ್ಲಿ ನಡೆದ ಭಾರಿ ಕದನ ಮೇನ್ ಕ್ರೀಕ್ ಕದನ (1864). ಯುದ್ಧದಲ್ಲಿ ಸಂಚುಕೂಟದ ಜನರಲ್ ಸ್ಟರ್ಲಿಂಗ್ ಪ್ರೈಸ್ ಪರಾಜಿತನಾಗಿ, ಪಶ್ಚಿಮದಲ್ಲಿ ಸಂಚುಗಾರರ ನಿಯಂತ್ರಣ ಕೊನೆಗೊಂಡಿತು. ಅಂತರ್ಯುದ್ಧದ ತರುವಾಯ 1868ರಲ್ಲಿ ಕ್ಯಾನ್ಸಸ್ ಆದಿವಾಸಿ ಬಣಗಳನ್ನು ಇಂಡಿಯನ್ ಜನರಿಗೆ ಮೀಸಲಾದ ಪ್ರಾಂತ್ಯಕ್ಕೆ ತ್ವರಿತವಾಗಿ ಸಾಗಿಸಿದರೂ 1870ರ ವರೆಗೆ ಈ ರಾಜ್ಯಕ್ಕೆ ಇಂಡಿಯನರಿಂದ ದಾಳಿಗಳು ತಪ್ಪಲಿಲ್ಲ.
ರಾಜಕೀಯ ಇತಿಹಾಸ : ರಾಜ್ಯ ಮತ್ತು ರಾಷ್ಟ್ರ ಹಂತಗಳೆರಡರಲ್ಲೂ ಕ್ಯಾನ್ಸಸ್ ಇತಿಹಾಸ ಮೂಲತಃ ಗಣರಾಜ್ಯದ ಇತಿಹಾಸವಾಗಿದೆ. ದಾಸ್ಯವನ್ನು ತೊಡೆದುಹಾಕಿ ಕ್ಯಾನ್ಸಸ್ ರಾಜ್ಯವನ್ನು ಸ್ವತಂತ್ರ ನಾಗರಿಕ ರಾಜ್ಯವನ್ನಾಗಿ ಮಾಡಲು ಬಹುಮಂದಿ ಏಬ್ರಹಾಂ ಲಿಂಕನ್ ಪಕ್ಷವನ್ನು ಸೇರಿದರು. ಅಮೆರಿಕನ್ ಅಂತರ್ಯುದ್ಧ ಕೊನೆಗೊಂಡ ಮೇಲೆ ಫೆಡರಲ್ ಸರ್ಕಾರದ ನುರಿತ ರಾಜಕಾರಣಿಗಳು ಈ ರಾಜ್ಯಕ್ಕೆ ಬಂದು ನೆಲೆಸಿದರು. ಇದರಿಂದ ರಿಪಬ್ಲಿಕನ್ ಪಕ್ಷಕ್ಕೆ ರಾಜಕೀಯದಲ್ಲಿ ಭದ್ರವಾದ ಸ್ಥಾನ ದೊರಕಿತು. ಆದರೆ 1870ರಿಂದ ಗ್ರಾಂಜರ್ಸ್, ರೈತಸಂಥ ಮತ್ತು ಪಾಪ್ಯುಲಿಸ್ಟ್ ಪಕ್ಷ ಹುಟ್ಟಿಕೊಂಡವು. ಪಾಪ್ಯುಲಿಸ್ಟ್ ಪಕ್ಷ 1892-94 ಮತ್ತು 1896-98ರ ಕಾಲದಲ್ಲಿ ರಾಜ್ಯದ ನಿಯಂತ್ರಣ ಪಡೆದಿತ್ತು. ಕ್ಯಾನ್ಸಸ್‍ನ ಮೊದಲ 100 ವರ್ಷಗಳ ರಾಜಕೀಯ ಇತಿಹಾಸದಲ್ಲಿ 35 ಗವರ್ನರುಗಳಾದರು. ಅವರಲ್ಲಿ 6 ಮಂದಿ ಡೆಮೊಕ್ರಾಟ್ ಪಕ್ಷದವರು. ಇಬ್ಬರು ಪಾಪ್ಯುಲಿಸ್ಟ್ ಪಕ್ಷದವರು. ಉಳಿದವರು ರಿಪಬ್ಲಿಕನ್ ಪಕ್ಷದವರು. ಎರಡನೆಯ ಮಹಾಯುದ್ಧದ ತರುವಾಯ ಡೆಮೊಕ್ರಾಟಿಕ್ ಪಕ್ಷ ರಾಜ್ಯ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಯಶಸ್ವಿಯಾಗಿದೆ.

ಕ್ಯಾನ್ಸಸ್ ರಾಜ್ಯದ ಮೊದಲ ಸಂವಿಧಾನದ ಪ್ರಕಾರ ಸ್ವತ್ತಿನ ವಿಚಾರದಲ್ಲಿ ಸ್ತ್ರೀಯರಿಗೆ ಪುರುಷರೊಂದಿಗೆ ಸಮಾನ ಹಕ್ಕು ಲಭಿಸಿತು. ಈ ರಾಜ್ಯದ ಮೊದಲ ಶಾಸನಮಂಡಲ ಸ್ತ್ರೀಯರಿಗೆ ಶಾಲಾ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕನ್ನು ನೀಡಿ, 1887ರಲ್ಲಿ ಆ ಹಕ್ಕನ್ನು ಪೌರಚುನಾವಣೆಗಳಿಗೂ ವಿಸ್ತರಿಸಿತು. 1912ರಲ್ಲಿ ಸ್ತ್ರೀಯರಿಗೆ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾನ ಮಾಡುವ ಹಕ್ಕು ಲಭಿಸಿತು. 1880ರಿಂದ 1948ರ ವರೆಗೆ ಕ್ಯಾನ್ಸಸ್ ರಾಜ್ಯದಲ್ಲಿ ಪಾನನಿರೋಧ ಕಾಯಿದೆ ಜಾರಿಯಲ್ಲಿತ್ತು. (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ